ನಮ್ ಕಡೆ ಸಾಂಬಾರ್ ಅಂದ್ರೆ ನಿಮ್ ಕಡೆ ತಿಳಿಯಕಿಲ್ಲ !
__________________________________________________________________________________
ಆಡು ಮುಟ್ಟದ ಸೊಪ್ಪಿಲ್ಲ, ಬೆಂಗಳೂರಿನಲ್ಲಿ ಆಡದ ಭಾಷೆಯಿಲ್ಲ. ಬೆಂಗಳೂರಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತಿನಿಂದ ಅಸ್ಸಾಮಿನವರೆಗೂ ಎಷ್ಟು ಭಾಷೆಗಳಿವೆಯೋ ಅಷ್ಟೂ ಇವೆ. ಅಷ್ಟೇ ಏಕೆ, ಪ್ರಪಂಚದ ನಾನಾ ಭಾಗದ ಭಾಷೆಗಳೂ ಇವೆ. ಇದೊಂದು 'ಬಹುರಾಷ್ಟ್ರೀಯ ಭಾಷಾಕೆಂದ್ರ' ಎಂದರೂ ತಪ್ಪಾಗಲಾರದು. ಇಷ್ಟೆಲ್ಲಾ ಭಾಷೆಗಳ ಮಧ್ಯೆ ಬೆಂಗಳೂರಿನದೇ ಅದ ಕನ್ನಡ-ಇಂಗ್ಲಿಷ್ ಮಿಶ್ರಿತ ಸ್ಥಳೀಯ ಭಾಷೆಯೊಂದಿದೆ. ಅದರ ಕೆಲವು ಉದಾಹರಣೆಗಳನ್ನು ನೋಡೋಣ :
ಮೇಷ್ಟ್ರು: ಏನಪ್ಪಾ ರಾಜಾ, ಹೋಂ ವರ್ಕ್ ಮಾಡ್ಕೊಂಡು ಬಾ ಅಂದ್ರೆ ಹಾಗೇ ಬಂದಿದೀಯ, ಯಾಕೆ ??
ವಿದ್ಯಾರ್ಥಿ: ಇಲ್ಲಾ ಸಾರ್, ನಮ್ಮಪ್ಪ ನೆನ್ನೆ ಆಚೆ ಹೋಗಿದ್ರು, ಅದಕ್ಕೆ ಮಾಡಕ್ಕಾಗಿಲ್ಲ !
ಕಂಡಕ್ಟರ್: ರೀ ಸ್ವಾಮಿ, ಹೇಳಿದ್ದು ಅರ್ಥ ಆಗಲ್ವ, ಚಿಲ್ರೆ ಕೊಡಿ, ಇದೆ ಫಸ್ಟ್ ಟ್ರಿಪ್ಪು, ಈಗ ಡಿಪೋ ದಿಂದ ಬರ್ತಾ ಇರಾದು.
ಪ್ರಯಾಣಿಕ: ಇಲ್ಲಾ ಸಾರ್, ಇದ್ದಿದ್ರೆ ನಾನ್ಯಾಕ್ ಇಟ್ಕಣನ? ಆಗಲೇ ಕೊಡ್ತಿದ್ದೆ.
ಕಾಲೇಜು ವಿದ್ಯಾರ್ಥಿ: ಲೋ ಮಗಾ, ಇವತ್ತು ಕ್ಲಾಸಿಗೆ ಬಂಕ್ ಹಾಕಿ ಫಿಲಮ್ಮಿಗೆ ಹೋಗಾನ ಅಂತ ಸ್ಕೆಚ್ ಹಾಕಿದಿನಿ. ಡೀಲಾ ?
ಸ್ನೇಹಿತ: ಅಯ್ಯೋ ನಿನ್ನ ಲೇಯ್, ಲೋ ಸಿಸ್ಯಾ, ಬ್ಯಾಡ ಕಣೋ, ನಂಗೆ ಫುಲ್ ಡೋಸಾಗ್ತಿದೆ, ನಮ್ಮಪ್ಪನಿಗೆ ಗೊತ್ತಾದ್ರೆ ಯಾವ ರೇಂಜ್ ನಲ್ಲಿ ಉಗೀತಾರೆ ಗೊತ್ತಾ ?
ಆಫೀಸ್ ಕ್ಲರ್ಕ್: ನಮ್ಮ ಬಾಸು ದೊಡ್ಡ ಕಿರಿಕ್ ಪಾರ್ಟಿ, ಸುಮ್ನೆ ಸಣ್ಣ ವಿಷಯಕ್ಕೆ ದೊಡ್ಡ ಬಿಲ್ಡ್ ಅಪ್ ಕೊಟ್ಟು ಸೀನ್ ಕ್ರಿಯೇಟ್ ಮಾಡ್ತಾರೆ.
ಆಫೀಸ್ ಬಾಯ್: ಏನಿಕ್ಕೆ ಸುಮ್ನೆ ಖರಾಬಾಗಿ ಉಗಿಸ್ಕೊಳ್ಳೋದು, ಬೆಳಾಗಿಂದ ಗುರ್ ಗುರ್ ಅಂತಿದಾರೆ.
ರಿಯಲ್ ಎಸ್ಟೇಟ್ ಏಜೆಂಟ್: ಈವಾಗ ನೀವು ಒಂದು ಡೀಲ್ ಮಾಡಿ ಮಾರಿದ್ರೆ, ಬೇಜಾನ್ ಕಾಸು ಮಾಡಬಹುದು.
ಮಾಲೀಕ: ಬಿಡೀ ಸಾರ್ ಎಲ್ಲರೂ ನಂದಿ ಬೆಟ್ಟ ತೋರಿಸ್ತಾರೆ
ಸೇಲ್ಸ್ ಮ್ಯಾನ್: ಮಾರ್ಕೆಟ್ಟಲ್ಲಿ ಹೆಚ್ಚಾಗಿ ಓಡ್ತಿರೋ ಬ್ರಾಂಡ್ ಇದೇ ಸಾರ್.
ಗಿರಾಕಿ: ಅಯ್ಯೋ ಬಿಡಿ, ಕಿಲಾಡಿ ಪಂಟರು ನೀವು, ಕಿವೀಗೆ ಲಾಲ್ ಬಾಗ್ ನ್ನೇ ಇಡ್ತೀರಿ.
ಸ್ನೇಹಿತ 1: ತಿರಗಾ ತಲೆಗೆ ಹುಳ ಬಿಟ್ಟು ಅವನ ತಲೆ ಕೆಡಿಸಿದ
ಸ್ನೇಹಿತ 2: ಇಲ್ಲಾ ಮಗಾ, ಇಬ್ರಿಗೂ ತಲೆ ಇಲ್ಲ
ಸ್ನೇಹಿತ 1 : ಯಾಕಮ್ಮಾ, ಮಂಜ ಮೊಬೈಲ್ ಕೊಟ್ಟಿಲ್ವ ? ಸುಮ್ನೆ ಹೇಳಿ ಕಾಗೆ ಹಾರಿಸಿದನಾ ?
ಸ್ನೇಹಿತ 2 : ಇಲ್ಲಾ ಗುರೂ, ಸುಮ್ನೆ ಸ್ಟೋರಿ ಹೇಳಿ ಸ್ಟಂಟ್ ಹೊಡೆದು ಬಾವುಟ ಹಾರಿಸಿದ.
ನೋಡಿದಿರಾ, ಇದು ಬೆಂಗಳೂರಿನ 'ಬೆಂಗ್ಳೂರ್ ಭಾಷೆ'. ಎಲ್ಲಿಂದ ಬಂದರೂ ಕೆಲವೇ ದಿನಗಳಲ್ಲಿ ಎಲ್ಲರೂ ಇದಕ್ಕೆ ಹೊಂದಿಕೊಂಡು ಬಿಡುತ್ತಾರೆ. ಅವರು ಮಾತನಾಡುವ ಶೈಲಿಯೇ 'ಬೆಂಗ್ಳೂರು' ಶೈಲಿಯಾಗುತ್ತದೆ. ತಮ್ಮ ಮೂಲ ಭಾಷಾ ಶೈಲಿಯನ್ನು ಮಾತನಾಡಲು ತೀರಾ ಕಷ್ಟ ಪಡಬೇಕಾಗುತ್ತದೆ.
ಒಟ್ಟಿನಲ್ಲಿ ಈ 'ಬೆಂಗ್ಳೂರ್ ಭಾಷೆ'ಗೆ ತನ್ನದೇ ಆದ 'ಸ್ಕೋಪ್' ಇದ್ದೇ ಇದೆ !
__________________________________________________________________________________
- ರಾಘವೇಂದ್ರ ಅಡಿಗ ತೀರ್ಥಹಳ್ಳಿ, ಬೆಂಗಳೂರು