Wednesday, January 18, 2012

ಶ್ರೀ ಗುಂಡ್ಮಿ ಕಾಳಿಂಗ ನಾವಡ Shree Gundmi Kalinga Navada

ಶ್ರೀ ಗುಂಡ್ಮಿ ಕಾಳಿಂಗ ನಾವಡ

'ಯಕ್ಷಗಾನ' ಎಂಬ ಪದವನ್ನು ಕೇಳಿದಾಗ ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು (1958-1990 - 32 ವರ್ಷ) (Shree Gundmi Kalinga Navada) ನೆನಪಾಗದೆ ಇರರು. ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ ಕಾಳಿಂಗ ನಾವಡರು. ಅವರು ಇಹಲೋಕ ತ್ಯಜಿಸಿ ಸುಮಾರು ಕಾಲು ಶತಮಾನಗಳೇ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ.

ದಿ.ಜಿ ಆರ್ ಕಾಳಿಂಗ ನಾವಡರು ಜೂನ್ 6, 1958ರಲ್ಲಿ ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ರಾಮಚಂದ್ರ ನಾವಡರ ಐದನೇ ಪುತ್ರನಾಗಿ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು. ಇವರ ತಂದೆ 1960 - 80 ದಶಕದಲ್ಲಿ ಪ್ರಸಿದ್ದ ಭಾಗವತರಾಗಿದ್ದರು. ತಮ್ಮ ತಂದೆಯವರಿಂದ ಶಿಕ್ಷಣ ಪಡೆದ ಇವರು 'ಹೂವಿನ ಕೋಲು', 'ಜಾಪು', 'ಚಾಪು' ಗಳ ಮೂಲಕ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದರು. ನಂತರ ರಾಮಚಂದ್ರ ನಾವಡರು, ಆಗಿನ ಪ್ರಸಿದ್ದ ಭಾಗವತರಾಗಿದ್ದ ಶ್ರೀ ನಾರಣಪ್ಪ ಉಪ್ಪೂರು (1918-1984) ರವರ ಬಳಿ ಸೇರಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಕಾಳಿಂಗ ನಾವಡರಲ್ಲಿ ಉಜ್ಜ್ವಲವಾದ ಭವಿಷ್ಯವಿರುವುದನ್ನು ಕಂಡ ನಾರಣಪ್ಪ ಉಪ್ಪೂರು ರವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದರು. ಶ್ರೀ ನಾರಣಪ್ಪ ಉಪ್ಪೂರುರವರು ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು. ತಮ್ಮ ಗುರು ಶ್ರೀ ನಾರಣಪ್ಪ ಉಪ್ಪೂರುರವರ ಜೊತೆಗೂಡಿ, 1972 ರಲ್ಲಿ, ಅಂದರೆ ಕೇವಲ 14 ನೇ ವಯಸ್ಸಿನಲ್ಲಿ ಮುಖ್ಯ ಭಾಗವತರಾಗಿ ಕೋಟ ಶ್ರೀ ಅಮೃತೇಶ್ವರಿ ಮೇಳದಿಂದ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದ ನಾವಡರು, ನಂತರ 1977 ರಲ್ಲಿ ಶ್ರೀ ವಿಜಯಶ್ರೀ ಮೇಳ, ಪೆರ್ಡೂರು, ನಂತರ 1978 ರಿಂದ 1990 ರವರೆಗೆ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ-ಸಾಲಿಗ್ರಾಮ ಮೇಳದಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದರು. ನವೆಂಬರ್ 1988 ರಲ್ಲಿ ಬಹ್ರೈನ್ ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು. ಶ್ರೀ ಕಾಳಿಂಗ ನಾವಡರು ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು, ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ 'ಭಸ್ಮಾಸುರ ಮೋಹಿನಿ' ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿ, ಯಕ್ಷಗಾನಕ್ಕೆ ಅಷ್ಟೇನೂ ಆಸಕ್ತಿಯಿಲ್ಲದಿದ್ದ ಮುಂಬಯಿಯಲ್ಲಿ, ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ಇವರಿಬ್ಬರದು. ನಾವಡರ 'ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ.........', 'ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ......' ಮುಂತಾದ ಪದ್ಯಗಳನ್ನು ಕೇಳಿದಾಗ ಮೈ ನವಿರೇಳುತ್ತದೆ.

1983
ರಲ್ಲಿ ಶ್ರೀಮತಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ ಆಗ್ನೇಯ ನಾವಡ ಎಂಬ ಮಗನಿದ್ದಾರೆ.

ಯಾವುದೇ ಉನ್ನತ ಶಿಕ್ಷಣ ಇಲ್ಲದಿದ್ದ ನಾವಡರು ಶಿವರಂಜಿನಿ, ಚಕ್ರವಾಕ, ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದದ್ದಲ್ಲದೆ, ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ ಮುಂತಾದ ಪ್ರಸಿದ್ದ ಯಕ್ಷಗಾನ ಪ್ರಸಂಗಗಳನ್ನು ಛಂದೋಬದ್ದವಾಗಿ, ಮನಮೋಹಕವಾಗಿ ರಚಿಸಿದ್ದಾರೆ. ಅದರಲ್ಲೂ 'ನಾಗಶ್ರೀ' ಪ್ರಸಂಗವಂತೂ ಸಾವಿರಾರು ಪ್ರದರ್ಶನಗಳನ್ನು ಕಂಡು ದಾಖಲೆಯನ್ನೇ ನಿರ್ಮಿಸಿತು. ಅತೀ ಚಿಕ್ಕ ವಯಸ್ಸಿನಲ್ಲಿಯೇ, ಅಂದರೆ ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು.

ಕಾಳಿಂಗ ನಾವಡರ ಕೆಲವು ಪ್ರಸಿದ್ದ ಯಕ್ಷಗಾನ ಪ್ರಸಂಗಗಳು: ಅಮೃತಮತಿ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ, ಭಾಗ್ಯಶ್ರೀ, ನಾಗಶ್ರೀ, ಶ್ರೀ ಕೃಷ್ಣ ಸಾರಥ್ಯ, ಬಬ್ರುವಾಹನ, ಭಸ್ಮಾಸುರ ಮೋಹಿನಿ, ಬಾಲ ಸುಧೀರ, ಮಾಗಧ ವಧೆ, ಗದಾಯುದ್ಧ, ಚಕ್ರವ್ಯೂಹ, ಭೀಷ್ಮ ವಿಜಯ, ರಾಣಿ ಶಶಿಪ್ರಭೆ, ಕನಸ ಕಂಡ ಕಂಸ, ಮಹಾಕವಿ ಕಾಳಿದಾಸ, ದ್ರೌಪದಿ ಪ್ರತಾಪ, ಚೆಲುವೆ ಚಿತ್ರಾವತಿ, ಕೀಚಕ ವಧೆ, ಶನಿ ಮಹಾತ್ಮೆ ಮುಂತಾದವು....ಕಾಳಿಂಗ ನಾವಡರ ಹಾಡುಗಾರಿಕೆಯ ಧ್ವನಿಸುರುಳಿಗಳನ್ನು ಭಾರತದ ಹೆಸರಾಂತ ಧ್ವನಿಮುದ್ರಣ ಸಂಸ್ಥೆಯಾದ ಟಿ-ಸೀರೀಸ್, ಆನಂದ್ ಆಡಿಯೋ ಸೇರಿದಂತೆ ಹಲವಾರು ಸಂಸ್ಥೆಗಳು ಹೊರತಂದಿವೆ.

ಸಾಮಾನ್ಯವಾಗಿ ಭಾಗವತರು ಎಷ್ಟೇ ಚೆನ್ನಾಗಿ ಹಾಡಿದರೂ, ವೇಷಧಾರಿಗಳಿಗಿಂತ ಹೆಚ್ಚಿನ ಜನಪ್ರಿಯತೆ-ಮನ್ನಣೆ ಪಡೆಯುವುದು ತೀರಾ ಕಷ್ಟ. ಆದರೆ ಕಾಳಿಂಗ ನಾವಡರು ತೀರಾ ಕಡಿಮೆ ಸಮಯದಲ್ಲಿ, ತೀರಾ ಚಿಕ್ಕ ಪ್ರಾಯದಲ್ಲಿ, ಬ್ರಹ್ಮಾಂಡ ಜನಪ್ರಿಯತೆಯನ್ನು ಗಳಿಸಿದರು. ಅವರನ್ನು ನೋಡಲು, ಅವರ ಭಾಗವತಿಕೆಯನ್ನು ಕೇಳಲೆಂದೇ ಕಲಾಭಿಮಾನಿಗಳು ಬರುತ್ತಿದ್ದರು. ಯಕ್ಷಗಾನ ಕಲೆಯ ಮೇಲಿನ ಶ್ರದ್ಧೆ, ಭಕ್ತಿ, ಶಿಸ್ತು, ನಿರಹಂಕಾರಗಳು ನಾವಡರನ್ನು ಕೀರ್ತಿಯ ಶಿಖರಕ್ಕೆ ಏರುವಂತೆ ಮಾಡಿತು. ನಾವಡರ ಭಾಗವತಿಕೆ ಕೇಳಲೆಂದೇ ಅವರ ಮೇಳ ಹೋದ ಕಡೆಗೆಲ್ಲಾ ಹೋಗುವ ಯಕ್ಷಪ್ರಿಯರಿದ್ದರು ಎಂದರೆ, ಅವರ ಮಧುರ ಗಾಯನದ ಮೋಡಿ ಎಷ್ಟರ ಮಟ್ಟಿಗೆ ಎಲ್ಲರ ಮನಸೂರೆಗೊಂಡಿತ್ತು ಎಂಬುದನ್ನು ಊಹಿಸಬಹುದು. ಸಿನೆಮಾ ಹಾಗೂ ಟಿ ವಿ ಮತ್ತಿತರ ಮನೋರಂಜನಾ ಮಾಧ್ಯಮಗಳು ತಮ್ಮ ಜಾಲವನ್ನು ವೇಗವಾಗಿ ಪಸರಿಸುತ್ತಿರುವ ಸಂದರ್ಭದಲ್ಲಿಯೇ, ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಶಕ್ತಿ ನಾವಡರದು.

ಕಾಳಿಂಗ ನಾವಡರು ಅತೀ ಚಿಕ್ಕ ವಯಸ್ಸಿನಲ್ಲಿ, ಅಂದರೆ ತಮ್ಮ 32ನೆ ವಯಸ್ಸಿನಲ್ಲಿ ಮೇ 27, 1990ರಂದು ರಸ್ತೆ ಅಪಘಾತವೊಂದಲ್ಲಿ ವಿಧಿವಶರಾದರು. ಯಕ್ಷಲೋಕ ಕಂಡು ಕೇಳರಿಯದಿದ್ದ ಕೋಗಿಲೆಯ ಕಂಠ ಸ್ತಬ್ಧವಾಯಿತು. ಇಂದಿಗೂ ಪ್ರತಿಯೊಬ್ಬ ಯಕ್ಷಪ್ರೆಮಿಯ ಹೃದಯದ ಬಡಿತದೊಂದಿಗಿರುವ ಕಾಳಿಂಗ ನಾವಡರು ಎಂದೆಂದಿಗೂ ಅಮರ.

ನವೆಂಬರ್, 1990 ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ', 'ವರ್ಷದ ವ್ಯಕ್ತಿ ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.

ಕಾಳಿಂಗ ನಾವಡರ ಸಂಸ್ಮರಣಾ ವಿಂಶತಿ (ಇಪ್ಪತ್ತನೆಯ) ವರ್ಷದಲ್ಲಿ ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ನಿರ್ದೇಶನದಲ್ಲಿ ಶ್ರೀ ಜಿ. ರಾಘವೇಂದ್ರ ಮಯ್ಯ ನಿರೂಪಿಸಿ, ಶ್ರೀ ಪ್ರಕಾಶ್ ಶೆಟ್ಟಿ ಶೇರ್ಡಿಮನೆ ಅರ್ಪಿಸುವ, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಥಾನ , ಶೃಂಗೇರಿ ಚಿತ್ರಿಸಿರುವ ಯಕ್ಷಗಾನದ ಕಂಚಿನ ಕಂಠ, ಭಾಗವತ 'ಕಾಳಿಂಗ ನಾವಡ ನೆನಪಿನ ನಾವೆ' - ಕಾಳಿಂಗ ನಾವಡರ ಯಶೋಗಾಥೆಯ ಪ್ರಪ್ರಥಮ ವೀಡಿಯೊ ಸಾಕ್ಷ್ಯಚಿತ್ರದ (ವೀಡಿಯೊ) (Documentory) ಜೊತೆಗೆ ಶ್ರೀ ಆರ್ ಜಿ ಭಟ್, ಹುಬ್ಬಳ್ಳಿ ಅರ್ಪಿಸುವ 'ಕಾಳಿಂಗ ನಾವಡರಿಗೆ ರಾಘವೇಂದ್ರ ಮಯ್ಯರಿಂದ ಗಾನ ನಮನ' (ಆಡಿಯೋ ) ಒಳಗೊಂಡಿರುವ 'ಸಿಡಿ'ಯು ಕ್ಯಾಸೆಟ್ ಕಾರ್ನರ್, ಅದಮಾರು ಮಠದ ಹತ್ತಿರ, ಉಡುಪಿ - 576 101 , ದೂ: 0820 -2527148 ಹಾಗೂ ಕ್ಯಾಸೆಟ್ ಕಾರ್ನರ್, ನಂ. 138, ಗಜೇಂದ್ರ ಕಾಂಪ್ಲೆಕ್ಸ್, ಶ್ರೀನಗರ ಅಪೆಕ್ಸ್ ಬ್ಯಾಂಕ್ ಬಸ್ ನಿಲ್ದಾಣದ ಹತ್ತಿರ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು - 560 050 , ದೂ: 98452 15995, ಇಲ್ಲಿ ಲಭ್ಯವಿದ್ದು, ಕಲಾಭಿಮಾನಿಗಳು ಇದನ್ನು ಖರೀದಿಸುವುದರ ಮೂಲಕ ವಿಶೇಷವಾದ ಹಾಗೂ ಅಪರೂಪವಾದ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಒಳಗೊಂಡಿರುವ 'ಸಿಡಿ'ಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಕೋರುತ್ತೇವೆ. ಇದು ಪ್ರತಿಯೊಬ್ಬ ಯಕ್ಷಪ್ರೇಮಿಯ ಮನೆಯಲ್ಲಿ ಇರಲೇಬೇಕಾದ ಸಂಗ್ರಹವಾಗಿದ್ದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ರಮೇಶ್ ಬೇಗಾರ್, ದೂ: 94481 01708. ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ಸಾರಥ್ಯದ 'ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಥಾನ, ಶೃಂಗೇರಿ' ಶ್ರೀ ಕಾಳಿಂಗ ನಾವಡರ ಹಾಗೂ ಯಕ್ಷಗಾನ ಕಲೆಯ ಸೇವೆಯಲ್ಲಿ ತೊಡಗಿದೆ. ಯಕ್ಷಗಾನ ಹಾಗೂ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ "ಕಲಾ ಕದಂಬ ಆರ್ಟ್ ಸೆಂಟರ್" ಸಂಸ್ಥೆ ಯಕ್ಷ ಸಾಧಕರಿಗೆ ಪ್ರತಿ ವರ್ಷಕಾಳಿಂಗ ನಾವಡಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

(ಸಂಗ್ರಹ : ವಿವಿಧ ಮೂಲಗಳಿಂದ)

ಶ್ರೀ ಕಾಳಿಂಗ ನಾವಡ ಫೇಸ್ ಬುಕ್ ಪುಟವನ್ನು ಸೇರಲು ಇಲ್ಲಿಗೆ ಭೇಟಿ ನೀಡಿ : https://www.facebook.com/pages/Kalinga-Navada/129874507063852

ಧನ್ಯವಾದಗಳೊಂದಿಗೆ
ರಾಘವೇಂದ್ರ ಅಡಿಗ ತೀರ್ಥಹಳ್ಳಿ