Friday, August 24, 2012

ಜೀರಿಗೆ ಮೆಣಸು



ಜೀರಿಗೆ ಮೆಣಸು

ಮೆಣಸಿನ ಜಾತಿಗಳಲ್ಲಿ ಒಂದು 'ಜೀರಿಗೆ ಮೆಣಸು'. ಹೆಸರೇ ಹೇಳುವ ಹಾಗೆ ಚಿಕ್ಕದಾಗಿರುವ ಇದು ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಬೆಳೆಯುತ್ತದೆ. Capsicum Chinense (Thai Chilli) ಎಂಬುದು ಇದರ ವೈಜ್ಞಾನಿಕ ಹೆಸರಾಗಿದ್ದು, ಇದರ ಮೂಲ ಥೈಲ್ಯಾಂಡ್ ಎನ್ನಲಾಗಿದೆತೋಟದಲ್ಲಿ ಅಥವಾ ಬೇಲಿ ಬದಿಯಲ್ಲಿ ನೆಟ್ಟರೆ ತಾನಾಗಿ ಬೆಳೆಯುವುದಲ್ಲದೆ ಇದಕ್ಕೆ ವಿಶೇಷವಾಗಿ ಗೊಬ್ಬರ ಅಥವಾ ನೀರಿನ ವ್ಯವಸ್ಥೆ ಮಾಡಬೇಕಾಗಿಲ್ಲ. ತೀವ್ರವಾದ ಖಾರ ಇರುವ ಇದನ್ನು ಹಸಿಮೆಣಸಿಗೆ ಪರ್ಯಾಯವಾಗಿ ಉಪಯೋಗಿಸಬಹುದು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮನೆ ಬಳಿ ಇದನ್ನು ಬೆಳೆಯುತ್ತಾರೆ. ಮಧ್ಯಾಹ್ನ ಅಡುಗೆ ಮಾಡುವ ಸಮಯದಲ್ಲಿ ಮೆಣಸನ್ನು ಗಿಡದಿಂದ ಕೊಯ್ದು ಉಪಯೋಗಿಸುತ್ತಾರೆ. ಖಾರ ತುಂಬಾ ಜಾಸ್ತಿ ಇರುವುದರಿಂದ ಚಟ್ನಿ ಮಾಡುವುದಾದರೆ ನಾಲ್ಕೈದು ಮೆಣಸಿನ ಕಾಯಿ ಸಾಕಾಗುತ್ತದೆ. ಹಾಗೆಯೇ ಇದರ ಚಿಗುರೆಲೆಯನ್ನು ತಂಬಳಿ ಹಾಗೂ ಚಟ್ನಿ ಮಾಡಲು ಉಪಯೋಗಿಸುತ್ತಾರೆ. ಇದರ ಇನ್ನೊಂದು ವಿಶೇಷ ಎಂದರೆ ವರ್ಷದ 365 ದಿನವೂ ಕಾಯಿ ಬಿಡುತ್ತದೆ. ಮೆಣಸು ಅಕಾಶದ ಕಡೆ ಮುಖ ಮಾಡಿ ಬೆಳೆಯುವುದು ಇನ್ನೊಂದು ವಿಶೇಷ. ಇದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಸೂಜಿ ಮೆಣಸು, ಲವಂಗ ಮೆಣಸು, ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಜೀರಿಗೆ ಮುಂಚಿ, ಪರಂಗಿ ಮೆಣಸು ಮುಂತಾದ ಹೆಸರಿನಿಂದ ಕರೆಯುತ್ತಾರೆ.


ಇದನ್ನು ಒಣಮೆಣಸಿನ ಕಾಯಿಯ ಹಾಗೆ ಹಣ್ಣು ಮೆಣಸನ್ನು ಒಣಗಿಸಿ ವರ್ಷಗಟ್ಟಲೆ ಉಪಯೋಗಿಸಬಹುದು. ಹಸಿ ಮೆಣಸಿನ ಕಾಯಿಯಂತೆ ಇದು ದೇಹಕ್ಕೆ ಉಷ್ಣವಲ್ಲ, ಬದಲಾಗಿ ಇದು ದೇಹಕ್ಕೆ ತಂಪು. ಹಸಿ ಮೆಣಸಿನ ಕಾಯಿಯ ಸೇವನೆಯಿಂದಾಗುವ ಅಡ್ಡ ಪರಿಣಾಮಗಳಾದ ಎದೆ ಸುಡುವುದು, ಕರುಳು ಹುಣ್ಣು (ಅಲ್ಸರ್), ಹೊಟ್ಟೆ ಉರಿ, ಉಷ್ಣ ಮುಂತಾದವು, ಜೀರಿಗೆ ಮೆಣಸಿನ ಉಪಯೋಗದಿಂದ ಆಗುವುದಿಲ್ಲ. ಚಟ್ನಿ, ಗೊಜ್ಜು, ಕಾಯಿರಸ, ಉಪ್ಪಿನಕಾಯಿ, ಚಟ್ನಿಪುಡಿ ಮುಂತಾದ ಖಾರ ಪ್ರಧಾನವಾದ ಮೆಲೋಗರಗಳಲ್ಲಿ ಇದನ್ನು ಬಳಸಬಹುದು. ಇದರ ಗಿಡವನ್ನು ಮುಟ್ಟಿದರೆ ಅಥವಾ ಕಾಯಿ ಕೊಯ್ದರೆ, ಸಾಬೂನು ಹಾಕಿ ಕೈ ತೊಳಿಯುವುದು ಉತ್ತಮ ಹಾಗೂ ಚಿಕ್ಕ ಮಕ್ಕಳ ಕೈಗೆ ಜೀರಿಗೆ ಮೆಣಸು ಸಿಗದಂತೆ ನೋಡಿಕೊಳ್ಳುವುದು ಒಳಿತು. ಇದು ಎಷ್ಟು ಖಾರ ಎಂದು ಇದರಲ್ಲೇ ಗೊತ್ತಾಗುತ್ತದೆ.

ಒಟ್ಟಿನಲ್ಲಿ ಜೀರಿಗೆ ಮೆಣಸು 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬ ಗಾದೆಗೆ ಸರಿಯಾಗಿ ಹೊಂದಿಕೆಯಾಗುತ್ತದೆ.