Wednesday, December 8, 2010

ಆಫೀಸಿಗೆ ಹೋಗುವ ಬ್ರಹ್ಮಚಾರಿಯ ದಿನಚರಿ

ಆಫೀಸಿಗೆ ಹೋಗುವ ಬ್ರಹ್ಮಚಾರಿಯ ದಿನಚರಿ

ಬೆಂಗಳೂರಿನ ಬ್ರಹ್ಮಚಾರಿಗಳ, ಅದರಲ್ಲೂ ಬೇರೆ ಊರಿನಿಂದ ಬಂದು ಇಲ್ಲಿ ಒಬ್ಬರೇ ನೆಲೆಸಿರುವವರ ದಿನಚರಿಯನ್ನು ನೋಡಿದರೆ ನಿಮಗೆ ಅಚ್ಚರಿಯಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಮನೆಯಿಂದ ಹೊರಟು ಬಸ್ ಸ್ಟಾಪ್ ಹತ್ತಿರವೋ, ಆಫೀಸಿನ ಹತ್ತಿರವೋ ಇರುವ ದರ್ಶಿನಿಯಲ್ಲಿ ಇಡ್ಲಿ ತಿಂದು ಅರ್ಧ ಕಾಫಿ ಕುಡಿದರೆ ಬೆಳಗಿನ ಉಪಹಾರದ ವ್ಯವಸ್ಥೆ ಮುಗಿಯಿತು. ಇನ್ನು ಆಫೀಸಿಗೆ ಹೋದರೆ ಅಲ್ಲಿ ಬೇರೆಯವರಿಂದ 'ನಿಮಗೇನು, ಹೆಂಡತಿಯಾ ? ಮಕ್ಕಳಾ ? ಸಂಸಾರವಾ ? ಆರಾಮಾಗಿ ಇರ್ತೀರ' ಎಂಬ ಮಾತುಗಳು ಬೇರೆ.

ಮಧ್ಯಾಹ್ನದ ಹೊತ್ತಿಗೆ ಹತ್ತಿರದ ಹೋಟೆಲ್ನಲ್ಲಿ ಮೊಸರನ್ನ ಸೇವಿಸಿದರೆ ಮಧ್ಯಾಹ್ನದ 'ಭೋಜನ' ವ್ಯವಸ್ಥೆ ಮುಗಿಯಿತು. ಸಾಯಂಕಾಲ ಆಫೀಸಿನ ಗೃಹಸ್ಥರೆಲ್ಲರೂ ಬೇಗ ಹೊರಟು 'ನಿಮಗೇನು, ಮನೆಯಲ್ಲಿ ಯಾರಿದ್ದಾರೆ? ಮನೆಗೆ ಹೋಗಿ ಏನು ಮಾಡ್ತೀರಾ ?  ಲೇಟಾಗಿ ಹೊರಡಬಹುದಲ್ವ?' ಎಂಬ ಪುಕ್ಕಟೆ ಕುಹಕ. ರಾತ್ರಿ ಆಫೀಸಿನಿಂದ ಹೊರಟು ಮಾಮೂಲಿ ದರ್ಶಿನಿಗೆ ಹೋಗಿ ಸ್ವಲ್ಪ 'ಆಹಾರ ಪದಾರ್ಥ' ತಿಂದು (ಹಸಿವಿಲ್ಲದಿದ್ದರೆ ಈ ಕಾರ್ಯಕ್ರಮವೂ ರದ್ದು !) ಮನೆಗೆ ಹೋಗಿ ನಿದ್ರೆ ಮಾಡುವಾಗ 11 .30 ಗಂಟೆ. ಬೆಳಿಗ್ಗೆ ಮತ್ತದೇ ಕಥೆ-ವ್ಯಥೆ.

ಹೋಟೆಲ್ ಊಟ ಹಿಡಿಸದಿದ್ದಾಗ, ಮನೆಯಲ್ಲೇ ಅಡುಗೆ ಮಾಡಿಕೊಳ್ಳುವವರದು ಬೇರೆಯೇ 'ಕಾದಂಬರಿ'.

ಇನ್ನು ಹಬ್ಬ-ಹರಿದಿನಗಳೆಂದರೆ ಬ್ರಹ್ಮಚಾರಿಗೆ ಒಂದು ತರಹದ ರಜಾ ದಿನ ಅಷ್ಟೇ. ಆಫೀಸಿಗೆ ರಜಾ ಇದೆ ಎಂದರೆ ಏನೋ ಹಬ್ಬ ಇರಬಹುದು ಎಂದರ್ಥ. ಅದೇ ಹೋಟೆಲ್ ನ ಅದೇ ಚಿತ್ರಾನ್ನ, ಅದೇ ಅರ್ಧ 'ತಿಳಿ' ಕಾಫಿ. ಕೆಲವರು ರಜಾದಿನವೂ ಮನೆಯಲ್ಲಿರಲು ಬೇಜಾರಾಗಿ ಆಫೀಸಿಗೆ ಹೋಗುತ್ತಾರೆ. ಇನ್ನು ಭಾನುವಾರ ರಜಾದಿನ, ವಿಶ್ರಾಂತಿ ಎಂದುಕೊಂಡರೆ ಮನೆ ಸ್ವಚ್ಚ ಮಾಡುವುದು, ಬಟ್ಟೆ ಒಗೆಯುವುದು, ಇಸ್ತ್ರಿ ಮಾಡುವುದು ಇತ್ಯಾದಿಗಳಿಂದಾಗಿ ಬೇರೆ ದಿನಕ್ಕಿಂತ ಹೆಚ್ಚಿನ ಕೆಲಸ ಆಗುತ್ತದೆ.

ಬ್ರಹ್ಮಚಾರಿಗೆ ಏನಾದರೂ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸುವವರು ಬೇರಾರು ಅಲ್ಲ, ಅವರ ಆಪ್ತ ಸ್ನೇಹಿತರು.

ಒಟ್ಟಿನಲ್ಲಿ ಬೆಂಗಳೂರು ಬ್ರಹ್ಮಚಾರಿಯ ಜೀವನವನ್ನು ಆ ಬ್ರಹ್ಮನೇ ಬಂದು ನೋಡಿದರೂ ಬೇಜಾರಾಗುವುದು ಖಂಡಿತ.

6 comments:

Raghuram Holla said...

nice one, this is the real story in Bangalore.....

ಪೇತ್ರಿ ಶಂಕರ್ ಶೆಟ್ಟಿ, ಮಸ್ಕತ್ said...

ಚೆನ್ನಾಗಿ ಹೇಳಿದ್ದೀರಿ ಅಡಿಗರೇ, ನಾನು ಇದನ್ನು ಅನುಭವಿಸಿದವನೇ.. ಧನ್ಯವಾದಗಳು....
ಪೇತ್ರಿ ಶಂಕರ್ ಶೆಟ್ಟಿ, ಮಸ್ಕತ್

ಪಿ. ಗಂಗಾಧರ ನಾಯಕ, (ಹೊನ್ನಾವರ ತಾಲೂಕು), ಬೆಂಗಳೂರು   said...

ಲೇಖನ ಚೆನ್ನಾಗಿದೆ. ಇಲ್ಲಿ ತಣ್ಣೀರು ಸ್ನಾನ ಮಾಡಿ, ಬಸ್ಸಿನಲ್ಲಿ ನೇತಾಡಿಕೊಂಡು ಓಡಾಡಿ, ಹೋಟೆಲ್ ಊಟ ಮಾಡಿ, ಊಟ-ನಿದ್ದೆ, ಹಬ್ಬ-ಹರಿದಿನ ಇಲ್ಲದ ಜೀವನವೇ ಒಂದು ನರಕ ಯಾತನೆ..  ಇದು ಒಂದೆರೆಡು ತಿಂಗಳುಗಳ ಕಥೆ ಅಲ್ಲ, 10-12 ವರ್ಷಗಳ ಕಥೆ. ಊರಿನಲ್ಲಿದ್ದವರಿಗೆ ಇದೆಲ್ಲ ಗೊತ್ತಾಗುವುದಿಲ್ಲ, ಬೆಂಗಳೂರಿನಲ್ಲಿದ್ದಾನೆ ಅಂತಾರೆ. ಅವರನ್ನು ಇಲ್ಲಿ ಕರೆದುಕೊಂಡು ಬಂದರೆ ಎರಡೇ ದಿನದಲ್ಲಿ ಊರಿಗೆ ಪರಾರಿ ಆಗೋದು ಗ್ಯಾರಂಟೀ. ... ನನ್ನ ಕಥೆನೂ ಹೀಗೆ ಇದೆ...ಧನ್ಯವಾದಗಳು ಅಡಿಗರೇ...

Anonymous said...

nice narrating of bachelor’s life in bangalore, thank u …

Naresh K G, Bangalore said...

well said raghavendra, i am also a victim of hotel food, thanks for the article…

Raghavendra Adiga Thirthahalli said...

Thank you all.......